ಹಿರೇಕೆರೂರು
	ಭಾರತದ ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯ ಒಂದು ತಾಲ್ಲೂಕು, ತಾಲ್ಲೂಕಿನ ಆಡಳಿತ ಕೇಂದ್ರ ಪಟ್ಟಣ. ಈ ತಾಲ್ಲೂಕನ್ನು ಉತ್ತರದಲ್ಲಿ ಬ್ಯಾಡಗಿ, ಪೂರ್ವದಲ್ಲಿ ರಾಣೆಬೆನ್ನೂರು ಮತ್ತು ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕೂ ಪಶ್ಚಿಮ ದಕ್ಷಿಣದಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ, ಶಿಕಾರಿಪುರ, ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕುಗಳೂ ಸುತ್ತುವರಿದಿವೆ. 126 ಗ್ರಾಮಗಳಿರುವ ತಾಲ್ಲೂಕಿನ ವಿಸ್ತೀರ್ಣ 801.6 ಚ.ಕಿಮೀ. ಜನಸಂಖ್ಯೆ 2,12,434.

	ಜಿಲ್ಲೆಯ ದಕ್ಷಿಣದ ಕೊನೆಯಲ್ಲಿರುವ ಈ ತಾಲ್ಲೂಕು ಸಹ್ಯಾದ್ರಿ ವಲಯದ ಪೂರ್ವ ಪ್ರದೇಶಕ್ಕೆ ಸೇರಿದ್ದು ಸಾಮಾನ್ಯ ಬೆಟ್ಟಗುಡ್ಡಗಳಿಂದ ಕೂಡಿದೆ. ಇವುಗಳಲ್ಲಿ ಮಾಸೂರು ಮತ್ತು ಕಡೂರು ಗುಡ್ಡಗಳು ಮುಖ್ಯವಾದವು. ಗಂಧದ ಮರಗಳಿಂದ ಕೂಡಿದ ಕುರುಚಲು ಅರಣ್ಯಪ್ರದೇಶವಿದೆ. ಸಾಕಷ್ಟು ಮಳೆ ಬೀಳುವ ಈ ತಾಲ್ಲೂಕಿನ ಹವಾಗುಣ ಹಿತಕರವೆನ್ನಬಹುದು. ತುಂಗಭದ್ರಾ ಈ ತಾಲ್ಲೂಕಿನ ಮುಖ್ಯ ನದಿ. ತಾಲ್ಲೂಕಿನ ಪೂರ್ವದಂಚಿನಲ್ಲಿ ಸ್ವಲ್ಪ ದೂರ ಗಡಿಯಾಗಿ ಹರಿದು ಹೊನ್ನಾಳಿ ಮತ್ತು ಹರಿಹರ ತಾಲ್ಲೂಕುಗಳನ್ನು ಬೇರ್ಪಡಿಸಿದೆ. ಈ ನದಿಯ ಎಡದಂಡೆಯುದ್ದಕ್ಕೂ ರೇವೆಮಣ್ಣಿನ ಪ್ರದೇಶವಿದೆ. ತಾಲ್ಲೂಕಿನ ದಕ್ಷಿಣ ಮತ್ತು ಪೂರ್ವ ಪ್ರದೇಶ ಹುಳಕೆರೆ ಮಣ್ಣಿನಿಂದಲೂ ಉಳಿದ ಕೆಲವೆಡೆ ಕೆಂಪು ಮತ್ತು ಕಪ್ಪುಮಿಶ್ರಿತ ಮಣ್ಣಿನಿಂದಲೂ ಕೂಡಿದೆ.

	ಹಿರೇಕೆರೂರು, ಚಿಕ್ಕೆರೂರು ಕೆರೆಗಳೂ ಪ್ರಸಿದ್ಧ ಮಾಸೂರು ಮದಗ ಕೆರೆಯೂ ಈ ತಾಲ್ಲೂಕಿನಲ್ಲಿವೆ. ನಾಲೆ ಮತ್ತು ಕೆರೆ ಬಾವಿಗಳಿಂದ ವ್ಯವಸಾಯಕ್ಕೆ ನೀರಾವರಿ ಕಲ್ಪಿಸಲಾಗಿದೆ. ಜೋಳ, ಬತ್ತ, ಕಬ್ಬು, ರಾಗಿ, ಹೆಸರು, ಹುರುಳಿ, ಕಡಲೆ, ತೊಗರಿ, ಮೆಣಸಿನಕಾಯಿ, ಸೇಂಗಾ ಮತ್ತು ಇತರ ತೈಲಬೀಜಗಳನ್ನೂ ಬೆಳೆಯುತ್ತಾರೆ. ವ್ಯವಸಾಯದ ಜೊತೆಗೆ ಪಶುಪಾಲನೆಯೂ ಉಂಟು. ತಾಲ್ಲೂಕಿನಲ್ಲಿ ಅಕ್ಕಿಗಿರಣಿಗಳು, ಮರಗೆಲಸ, ಮರದ ಸಾಮಾನುಗಳ ತಯಾರಿಕೆ ಮತ್ತು ಗ್ರಾಮೋದ್ಯೋಗ ಗಳುಂಟು.

	ಹಿರೇಕೆರೂರಿನ ಆಗ್ನೇಯಕ್ಕೆ 11 ಕಿಮೀ ದೂರದಲ್ಲಿರುವ ಮಾಸೂರು ಬಳಿ ಪ್ರಸಿದ್ಧ ಮದಗ ಕೆರೆಯೂ ಒಂದು ಹಳೆಯ ಕೋಟೆಯೂ ಇದೆ. ಇದೊಂದು ಸುತ್ತಲ ಗ್ರಾಮಗಳಿಗೆ ವ್ಯಾಪಾರಸ್ಥಳವೂ ಆಗಿದೆ. ಹಿರೇಕೆರೂರಿನ ನೈಋತ್ಯಕ್ಕೆ ಸು. 19 ಕಿಮೀ ದೂರದಲ್ಲಿರುವ ವರಾಹ ಗ್ರಾಮದಲ್ಲಿ ವೀರಬ್ರಹ್ಮ ದೇವಾಲಯದ ಬಳಿ ಕೆಲವು ಮಾಸ್ತಿಕಲ್ಲುಗಳಿವೆ. ಹಿರೇಕೆರೂರಿನ ವಾಯವ್ಯದಲ್ಲಿ ಸು. 2 ಕಿಮೀ ದುರದಲ್ಲಿರುವ ಬಾಳಂಬೀಡ ಗ್ರಾಮದಲ್ಲಿ ವಿಷಪರಿಹಾರೇಶ್ವರ ಮತ್ತು ಬಸವನ ದೇವಾಲಯಗಳಿವೆ. ಗ್ರಾಮದಲ್ಲಿ ದೊರೆತಿರುವ ಐದು ಶಾಸನಗಳಲ್ಲಿ ಮೂರು ಶಾಸನಗಳು 1058, 1079 ಮತ್ತು 1088ನೆಯ ಕಾಲಗಳಿಗೆ ಸೇರಿದವೆಂದು ಗುರುತಿಸಲಾಗಿದೆ. ಲಿಂಗವಿರುವ ವಿಷಪರಿಹಾರೇಶ್ವರ ದೇವಾಲಯ ವಿಷಜಂತುಗಳ ಕಡಿತದ ವಿಷವನ್ನು ಪರಿಹರಿಸುವುದೆಂದು ಸ್ಥಳೀಯ ನಂಬಿಕೆ. ಹಿರೇಕೆರೂರಿನ ಉತ್ತರಕ್ಕಿರುವ ಚಿನ್ನಮುಳಗುಂದ ಗ್ರಾಮದ ಈಶಾನ್ಯಕ್ಕೆ ಚಿಕ್ಕೇಶ್ವರ ದೇವಾಲಯವಿದೆ. ಗ್ರಾಮದ ಪೂರ್ವದಲ್ಲಿರುವ ಒಂದು ಗುಡ್ಡದಲ್ಲಿ ಸಿದ್ಧೇಶ್ವರ ಉದ್ಭವಲಿಂಗವಿದೆ. ಹಿರೇಕೆರೂರಿನ ಉತ್ತರಕ್ಕೆ ಸು. 9 ಕಿಮೀ ದೂರದಲ್ಲಿರುವ ಅಬ್ಬಲೂರು ಗ್ರಾಮದಲ್ಲಿ ಅನೇಕ ಐತಿಹಾಸಿಕ ಶಾಸನಗಳಿವೆ. 12ನೆಯ ಶತಮಾನದಲ್ಲಿ ಈ ಗ್ರಾಮ ಜೈನರ ಮುಖ್ಯ ಕೇಂದ್ರವಾಗಿತ್ತು. ಏಕಾಂತದ ರಾಮಯ್ಯ ಇಲ್ಲಿನ ಜೈನರೊಡನೆ ವಾದಿಸಿದನೆಂದೂ ಮುಂದೆ ಶೈವಮತ ಅಭಿವೃದ್ಧಿಯಾಯಿ ತೆಂದೂ ತಿಳಿದುಬರುತ್ತದೆ. ಇಲ್ಲಿ ಬ್ರಹ್ಮೇಶ್ವರ ಮತ್ತು ಸೋಮೇಶ್ವರ ದೇವಾಲಯಗಳಿವೆ. ಅಬ್ಬಲೂರು ಸರ್ವಜ್ಞನ ಹುಟ್ಟೂರೆನ್ನಲಾಗಿದೆ. ಹಿರೇಕೆರೂರಿನ ಆಗ್ನೇಯಕ್ಕೆ ಸುಮಾರು 14 ಕಿಮೀ ದೂರದಲ್ಲಿರುವ ರಟ್ಟೀಹಳ್ಳಿಯಲ್ಲಿ ಪುರಾತನ ಕದಂಬೇಶ್ವರ ದೇವಾಲಯ ಮತ್ತು ಒಂದು ಹಳೆಯ ಕೋಟೆಯಿದೆ. ಇಲ್ಲಿ ಚಾಳುಕ್ಯ, ಕಳಚುರಿ, ಸೇವುಣ ಮತ್ತು ವಿಜಯನಗರದ ಅರಸರಿಗೆ ಸೇರಿದ ಶಾಸನಗಳಿವೆ. ಹಿರೇಕೆರೂರಿನ ಆಗ್ನೇಯಕ್ಕೆ ಸು. 22 ಕಿಮೀ ದೂರದಲ್ಲಿ ನಾಗವಂದವಿದೆ. ಈ ಗ್ರಾಮದಲ್ಲಿರುವ ನಾಗಾರ್ಜುನ ದೇವಾಲಯ ಹೆಸರಾದದ್ದು.

	ಹಿರೇಕೆರೂರು ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಹುಬ್ಬಳ್ಳಿ-ಧಾರವಾಡದ ದಕ್ಷಿಣದಲ್ಲಿರುವ ಈ ಊರು ಹತ್ತಿರದ ಬ್ಯಾಡಗಿಯ ನೈಋತ್ಯಕ್ಕೆ 34 ಕಿಮೀ ದೂರದಲ್ಲಿದೆ. ಜನಸಂಖ್ಯೆ 15,874.

	ಹಿಂದೆ ಈ ಊರಿಗೆ ಪಿರಿಯ ಕೆರೆಯೂರು (ದೊಡ್ಡಕೆರೆಯುಳ್ಳ ಊರು) ಎಂಬ ಹೆಸರಿದ್ದು ಬರುಬರುತ್ತ ಹಿರೇಕೆರೂರು ಆಯಿತೆಂದು ಪ್ರತೀತಿ. ಊರಿನಲ್ಲಿ ತೋಟದ ವೀರಣ್ಣ, ಜನಾರ್ದನ, ಹನುಮಂತ ಮತ್ತು ದುರ್ಗಾ ದೇವಾಲಯಗಳಿವೆ. ತೋಟದ ವೀರಣ್ಣ ದೇವಾಲಯದ ಬಳಿಯಿರುವ ಸೂರ್ಯದೇವರು, ಜನಾರ್ದನ, ದುರ್ಗಾ ದೇವಾಲಯದಲ್ಲಿ ರುವ ತ್ರೈಪುರುಷ ಮತ್ತು ದುರ್ಗಾ ಈ ವಿಗ್ರಹಗಳು ನೋಡತಕ್ಕವು. ಇಲ್ಲಿ ಒಂಬತ್ತು ಶಾಸನಗಳು ದೊರಕಿವೆ.			
			*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ